ಹೋಳಿ
	ಉತ್ತರಭಾರತದ ಪ್ರಮುಖ ಹಬ್ಬಗಳಲ್ಲಿ ಒಂದು. ಹೋಳಿಯನ್ನು ಕುರಿತು ಹೋಳಿಹುಣ್ಣಿಮೆ, ಕಾಮನ ಹಬ್ಬ, ಹೋಳಿಕ ಹಬ್ಬ, ಹೋಳಿಸಿಗ್ಮ, ಹೋಳಿಹಳಬು ಬಣ್ಣದ ಆಟ (ನೀರಿನಲ್ಲಿ ಬಣ್ಣ ತುಂಬಿ ಎರಚಾಡುವುದು) ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಭಾರತದಾದ್ಯಂತ ಪುರಷರು ಜಾತಿ, ಮತ, ಪಂಥ-ಭೇದ ಮರೆತು ಉತ್ಸಾಹ, ಸಂಭ್ರಮ, ಸಡಗರದಿಂದ sಈ ಹಬ್ಬವನ್ನು ಆಚರಿಸುವುದು ರೂಢಿಯಲ್ಲಿದೆ. ಹೋಳಿಹಬ್ಬದ ಆಚರಣೆ ದುಷ್ಟ ಶಿಕ್ಷೆ-ಶಿಷ್ಟರಕ್ಷೆಯ ಜೊತೆಗೆ ಮಾನವ ತನ್ನ ಹಳೆಯ ನೋವುಗಳನ್ನು ಮರೆತು ಹೊಸತನಕ್ಕೆ ಕಾಲಿಡುವುದರ ಸಂಕಲ್ಪದ ಕುರುಹಾಗಿದೆ. 

	ಹೋಳಿ ಹಬ್ಬ ಕೆಲವೆಡೆ ಹದಿನೈದರಿಂದ ಇಪ್ಪತ್ತು ದಿನಗಳವರೆಗೆ ಆಡುವ ಮನರಂಜನ ಆಟವಾದರೆ ಇನ್ನು ಕೆಲವು ಕಡೆ ಎರಡು ದಿನದ ಆಟವಾಗಿದೆ. ಈ ಉತ್ಸವ ಹುಣ್ಣಿಮೆಯಿಂದ ಪ್ರಾರಂಭವಾದರೆ ರಂಗಪಂಚಮಿಯವರೆಗೆ ನಡೆಯುತ್ತದೆ. ಭಾರತದ ಗ್ರಾಮಗಳಲ್ಲಿ ಕಾಮನಕಟ್ಟೆಗಳಿಲ್ಲದ ಊರೇ ಇಲ್ಲ. ಕಾಮ ಬಲು ಚೆಲವ(ಮಾರ)ನೆಂಬ ನಂಬಿಕೆ ಜನಪದರಲ್ಲಿ ಇಂದಿಗೂ ಬೇರೂರಿದೆ. ಈ ಕಾರಣದಿಂದಲೇ ಗಂಡು ಮಕ್ಕಳ ಚೆಲುವನ್ನು ಕಾಮನಿಗೆ ಹೋಲಿಸಲಾಗಿದೆ. ಧರೆಯೋಳೀ ಹೋಳೀ ಪದಗಳನ್ನು ಪೇಳುವೆನು ಹರನಿಂದ ಮಡಿದ ಕಾಮಣ್ಣ ಎಂದು ಶಿವನ ಹಣೆಗಣ್ಣಿನಿಂದ ಸುಟ್ಟು ಹೋದ ಕಾಮಣ್ಣನ ಕತೆಯನ್ನು ಶಿವಪುರಾಣ ತಿಳಿಸುತ್ತದೆ. ಅಲ್ಲದೆ ಸ್ಕಾಂದಪುರಾಣ, ಕಾಳಿದಾಸನ ಕುಮಾರ ಸಂಭವ, ಹರಿಹರನ ಗಿರಜಾಕಲ್ಯಾಣ, ವಚನ ಸಾಹಿತ್ಯ, ದಾಸ ಸಾಹಿತ್ಯಗಳಿಂದಲೂ ಹೋಳಿಹಬ್ಬದ ಬಗ್ಗೆ ಸಾಕಷ್ಟು ಮಾಹಿತಿ ದೊರಕುತ್ತವೆ.

	ಹೋಳಿ ವರ್ಷಾರಂಭದ ಸಂಕೇತವಾದರೂ ಉತ್ತರ ಭಾರತದಲ್ಲಿ ಪ್ರಚಲಿತವಿರುವ ಈ ಹಬ್ಬದ ಪ್ರಸಿದ್ಧಕತೆಯ ತುಣುಕೊಂದನ್ನು ವಿವರಿಸಲಾಗಿದೆ. ರಾಕ್ಷಸದೊರೆಯಾದ ಹಿರಣ್ಯಕಶಿಪು ಹಾಗೂ ದೇವತೆಗಳ ನಡುವೆ ನಡೆದ ಸಮರದಲ್ಲಿ ಹಿರಣ್ಯಕಶಿಪು ಜಯಶಾಲಿಯಾಗುತ್ತಾನೆ. ಅಂದಿನಿಂದಲೇ ಗರ್ವಿಯಾದ ದೊರೆ, ತನ್ನನ್ನು ಹೊರತು ಪಡಿಸಿ ಬೇರಾವ ದೇವರುಗಳನ್ನೂ ಮುಂದೆ ಪೂಜಿಸಬಾರದೆಂದೂ ಹಾಗೊಂದು ವೇಳೆ ಯಾರಾದರೂ ನಿಯಮ ಮೀರಿ ಪೂಜಿಸಿದ್ದೇ ಆದಲ್ಲಿ ಅಂಥವರಿಗೆ ಶಿಕ್ಷೆ ನೀಡುವುದಾಗಿ ಆಜ್ಞೆ ಹೊರಡಿಸಿದ. ಆತನ ಮಗ ಪ್ರಹ್ಲಾದ ಪರಮದೈವಭಕ್ತನಾದ್ದರಿಂದ ತಂದೆಯಾಜ್ಞೆ ಮೀರಿ ಹರಿಯನ್ನು ಪೂಜಿಸತೊಡಗಿದ. ಇದನ್ನರಿತ ಹಿರಣ್ಯಕಶಿಪು ಮಗನಿಗೆ ಘೋರ ಶಿಕ್ಷೆವಿಧಿಸಿದ. ಇದರಿಂದ ಏನೂ ಪ್ರಯೋಜನ ಆಗಲಿಲ್ಲ. ಆಗ ಆತ ತನ್ನ ತಂಗಿಯಾದ ಹೋಲಿಕಳ (ಈಕೆ ದುಷ್ಟರನ್ನು ಬೆಂಕಿಯಿಂದ ಸುಡುವ ಶಕ್ತಿ ಪಡೆದಿದ್ದಳು) ಬಳಿಗೆ ಬಂದು ತನ್ನ ಮಗನಾದ ಪ್ರಹ್ಲಾದನನ್ನು ಸುಟ್ಟು ಹಾಕಬೇಕೆಂದು ಮೊರೆಯಿಟ್ಟ. ಹೋಲಿಕಳು ಪ್ರಹ್ಲಾದನನ್ನು ಸುಡಲು ತನ್ನ ತೊಡೆಯ ಮೇಲೆ ಕೊರಿಸಿಕೊಂಡಾಗ, ತಾನೇ ಸುಟ್ಟು ಬೂದಿಯಾದಳು. ಈ ಘಟನೆಯೇ ಹೋಳಿಯ ಆಚರಣೆಗೆ ಮೂಲ ಪ್ರೇರಣೆಯಾದರೂ ಇದೇ ಮಾದರಿಯನ್ನು ಹೋಲುವ ಮತ್ತೊಂದು ಕಡೆ ಭಿನ್ನ ಸ್ವರೂಪದಲ್ಲಿದೆ. ತಾರಕಾಸುರನ ಉಪಟಳ ತಾಳದ ದೇವತೆಗಳು, ಆತನ ಸಂಹಾರಕ್ಕೆ ಸರ್ವಪ್ರಯತ್ನ ನಡೆಸಿದಾಗ, ಋಷಿಮುನಿಗಳು ತಾರಕಾಸುರನ ಸಾವು ಶಿವನ ಮಗನಿಂದ ಸಾಧ್ಯವೆಂದು ತಿಳಿಸಿದಾಗ ದೇವಾದಿದೇವತೆಗಳೆಲ್ಲ ಶಿವನಿಗೆ ಮದುವೆ ಮಾಡುವ ಸಂಭ್ರಮದಲ್ಲಿ ತೊಡಗಿಕೊಂಡಾಗ, ಈ ಮಹತ್ಕಾರ್ಯ ಕಾಮನಿಂದ ಮಾತ್ರ ಸಾದ್ಯವೆಂದು ನಿರ್ಣಯಿಸಿದರು, ಆತನ ಮೇಲೆ ಗುರುತರ ಜವಾಬ್ದಾರಿ ಯನ್ನು ಹೊರಿಸಿದರು. ಅನಂತರ ಕಾಮ ಗಿರಿಜೆಪೂಜೆ ಮಾಡತ್ತಿದ್ದಾಗ ತಪೋಮಗ್ನನಾದ ಶಿವನ ಮೇಲೆ ಪುಷ್ಪ ಬಾಣ ಪ್ರಯೊಗ ಮಾಡುತ್ತಾನೆ. ಕಾಮೋಪಟಳದಿಂದ ಕಣ್ದೆರೆದ ಶಿವ, ತನ್ನ ಉರಿಗಣ್ಣನ್ನು ತೆರೆದು ಕಾಮನನ್ನು ಭಸ್ಮ ಮಾಡುತ್ತಾನೆ. ಅದೇ ಸಮಯ ಕೋಪತಪ್ತಳಾದ ರತಿಯ ಬೇಗುದಿಯಿಂದ ಮನಕರಗಿದ ಪಾರ್ವತಿ ಶಿವನನ್ನು ಕಾಡಿಬೇಡಿ ರತಿಗೆ ಪತಿ ಭಿಕ್ಷೆ ನೀಡಲು ಕೋರುತ್ತಾಳೆ. ಶಿವ ಕಾಮನು ಅನಂಗನಾಗಿ ಬದುಕಲಿ ಎಂದು ಆಶೀರ್ವವದಿಸುತ್ತಾನೆ. ಕಾಮನ ಮರುಹುಟ್ಟಿನ ಸಂಕೇತವೇ ಈ ಹೋಳಿ. ಈ ಪ್ರಸಂಗಗಳು ಭಾರತೀಯ ಪುರಾಣ ಐತಿಹ್ಯಗಳಲ್ಲಿ ವಿಭಿನ್ನವಾಗಿ ಕಾಣಸಿಗುತ್ತವೆ. 

	ಹೋಳಿ ಹಬ್ಬ ವಸಂತಾಗಮನದ ಸಂಕೇತ. ಆಗ ಪ್ರಕೃತಿಯ ಗಿಡ, ಮರ ಬಳ್ಳಿ ಚಿಗುರಿ, ಹೂಬಿಟ್ಟು ಇಡೀ ನಿಸರ್ಗವೇ ಚೈತನ್ಯದಿಂದ ಕೂಡಿರುತ್ತದೆ. ಆ ಸಂದರ್ಭದಲ್ಲಿ ಊರಿನ ತರುಣರು ವಯಸ್ಸಾದ ವೃದ್ಧರೂ ಬಲುಹುರುಪಿನಿಂದ ಹೋಳಿ ಆಚರಿಸಲು ಮನೆಯಿಂದ ಹೊರಬೀಳುವರು. ಹುಣ್ಣಿಮೆಯ ದಿವಸ ಕಾಮನ ಸುಂದರವಾದ ಪ್ರತಿಮೆ ಮಾಡಿ ಆ ಪ್ರತಿಮೆಗೆ ಅಲಂಕರಣ ಮಾಡಿ, ಸಿಂಗರಿಸಿ ಊರಕಾಮನ ಕಟ್ಟೆಯ ಮುಂದಿನ ಚಪ್ಪರದ ಅಂಗಳದಲ್ಲಿ ಕಾಮನ ಪ್ರತಿಮೆ ಕೂರಿಸಿ, ಅನಂತರ ಊರಿನ ಸುತ್ತ ತಮಟೆ ಡೋಲಿನ ವಾದ್ಯಗಳ ಅಬ್ಬರದೊಂದಿಗೆ ಕುಣಿದು ಕುಪ್ಪಳಿಸಿ ಮನೆ ಮನೆಯಿಂದ ಸೌದೆ, ಬೆರಣಿ  ಇತ್ಯಾದಿ ವಸ್ತುಗಳನ್ನು ಸಂಗ್ರಹಿಸುವುದುಂಟು ಈ ಸಂದರ್ಭಕುರಿತ ಜನಪದ ತ್ರಿಪದಿಯೊಂದು ಹೀಗಿದೆ:

ಕಾಮಣ್ಣ ಸತ್ತಾನಂತ ಭೀಮಣ್ಣಗೋಳಾಡ್ತಾನೆ.

ಮನೆಗೈದೈದು ಸೌದೆ ಕೊಡ್ರವ್ವೋ ! ಕಾಮಣ್ಣನಿಗೆ 

ಚೆಂದಾಗಿ ಕಿಚ್ಚಹಾಯ್ಸೋಣ-ಹೀಗೆ ಹಾಡಿನ ಮೂಲಕ ಆಡಿ ಕುಣಿದು ಕುಪ್ಪಳಿಸಿ, ಸಂಗ್ರಹಿಸಿದ ಸೌದೆ-ಬೆರಣಿಗಳನ್ನು ಚಪ್ಪರ ಹಾಕಿದ ಕಾಮನ ಕಟ್ಟೆಯ ಮುಂದಿರಿಸಿ ಅದರ ಮೇಲೆ ಕಾಮನನ್ನು ಕೂರಿಸಿ ಹರಿಜನರ ಮನೆಯಲ್ಲಿ ಸಿದ್ಧ ಪಡಿಸಿದ ರತಿಪ್ರತಿಮೆ ಹಾಗೂ ಅವರ ಮನೆಯಿಂದಲೇ ಬೆಂಕಿಯನ್ನೂ ಕದ್ದು ತಂದು ರತಿಕಾಮರನ್ನು ಅಶ್ಲೀಲ ಕೆಟ್ಟ ಬೈಗುಳಗಳಿಂದ ಹಾಡುಗಳೊಂದಿಗೆ ನಿಂದಿಸಿ, ಸುಡುವರು. ವಾದ್ಯದೊಂದಿಗೆ ಕುಣಿದಾಡುವರು. ಮರುದಿನ ಕಾಮನನ್ನು ಸುಟ್ಟ ಬೂದಿಯನ್ನು ರೈತರು ತಮ್ಮ ಜಮೀನಿನಲ್ಲಿ ಚೆಲ್ಲಿ, ಬಿತ್ತುವ ಬೀಜಗಳೊಂದಿಗೆ ಬೆರಸಿ ಉಳುಮೆ ಮಾಡುವರು. ಈ ಆಚರಣೆಯಿಂದ ಮಳೆ ಬಿದ್ದು ಸಮೃದ್ದ ಫಲ ದೊರೆಯುತ್ತದೆಂಬ ನಂಬಿಕೆ ರೈತರಲ್ಲಿದೆ. ಸುಟ್ಟಕಾಮಣ್ಣನ ಬೂದಿಯನ್ನು ವಿವಿಧ ಬಣ್ಣದ ಪುಡಿಯೊಂದಿಗೆ ಬೆರಸಿ ಆತ್ಮೀಯ ಸ್ನೇಹಿತರಿಗೆ ನೆರೆಹೊರೆಯವರಿಗೆ ಮುಖ, ಮೈ, ಕೈ, ಬಟ್ಟೆಗಳಿಗೆ ಸಂತೋಷ-ಸಡಗರದಿಂದ ಬಳಿದು ಸಿಹಿಹಂಚಿ ಸಂಭ್ರಮಿಸುತ್ತಾರೆ. ಇನ್ನೂ ಕೆಲವೆಡೆ, ಈ ಬಣ್ಣದ ಪುಡಿಗಳನ್ನು ನೀರಿನ ತಪ್ಪಲೆಯಲ್ಲಿ ಬೆರೆಸಿ ಸ್ನೇಹಿತರ ತಲೆಯ ಮೇಲೆ ಸುರಿದು ಸಂತೋಷ ಹಂಚಿಕೊಳ್ಳುವುದಿದೆ. ವಿವಿಧ ಬಣ್ಣದ ನೀರನ್ನು ಬಿದಿರಿನ ಬೊಂಬು ಅಥವಾ ಬಾಟಲಿಗಳಲ್ಲಿ ತುಂಬಿರಿಸಿ ಪಿಚಕಾರಿ ಮಾಡುವುದೂ ಓಕುಳಿಯಾಡುವುದೂ ಇದೆ. ಈ ರೀತಿಯ ಮನರಂಜನೆ ಆಟಮುಗಿದ ಅನಂತರ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಸ್ನಾನ ಮಡಿಮಾಡಿ ಹೋಳಿ ಹಬ್ಬದ ಪ್ರಯುಕ್ತ ಸಿದ್ಧಪಡಿಸಿದ ವಿವಿಧ ಭಕ್ಷ್ಯ ಭೋಜ್ಯಗಳ ಔತಣಕೂಟದಲ್ಲಿ ಪಾಲ್ಗೊಂಡು ಹಬ್ಬದ ಸಂತೋಷವನ್ನು ಸಾಮೂಹಿಕವಾಗಿ ಹಂಚಿಕೊಳ್ಳುವರು.									
		(ಪಿ.ಜಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ